ಪರಂಪರಾವಧೂತ
ಶ್ರೀ ಶ್ರೀ ಸತೀಶ್ ಶರ್ಮ ಗುರುಜಿ
ಅವಧೂತ
“ಅವಧೂತ” ಎಂದರೆ ಎಲ್ಲವನ್ನೂ ಝಾಡಿಸಿ ಬಿಸಾಡಿದವನು. ಸುಖ-ದುಃಖ, ಪಾಪ-ಪುಣ್ಯ, ಧರ್ಮ-ಅಧರ್ಮ, ವಿದ್ಯೆ-ಅವಿದ್ಯೆ, ಒಳಿತು-ಕೆಡುಕು ಇಂಥ ಎಲ್ಲ ಹೊರೆಗಳನ್ನೂ ಕಳಚಿಕೊಂಡು ತನ್ನಲ್ಲಿ ತಾನೇ ಎಲ್ಲ ಕಾಲದಲ್ಲೂ ನೆಮ್ಮದಿಯಾಗಿ ಇರುವವನು. ಅವಧೂತನಿಗೆ ಸರಿ-ತಪ್ಪುಗಳ ಗೊಡವೆ ಇಲ್ಲದಿರುವುದರಿಂದ, ಪಾಪ-ಪುಣ್ಯಗಳ ಎಣಿಕೆಯಿಂದ ದೂರ ಉಳಿದಿರುವುದರಿಂದ, ವಿದ್ಯೆ-ಅವಿದ್ಯೆಗಳ ಸೋಂಕಿನಿಂದ ಮುಕ್ತನಾಗಿರುವುದರಿಂದ ಲೋಕದ ದೃಷ್ಟಿಗೆ ಅವನೊಬ್ಬ ವಿಲಕ್ಷಣ ವ್ಯಕ್ತಿಯಾಗಿ ಕಾಣುವುದು ಸಹಜ.
“ಅ-ವ-ಧೂ-ತ” ಎಂಬ ಅಕ್ಷರಗಳಿಗೆ ಸ್ವಾರಸ್ಯಕರವೂ, ಆಳವೂ ಆದ ಅರ್ಥವಿದೆ.
ಆಶಾಪಾಶವಿನಿರ್ಮುಕ್ತಃ ಆದಿಮಧ್ಯಾಂತನಿರ್ಮಲಃ |
ಆನಂದೇ ವರ್ತತೇ ನಿತ್ಯಂ ‘ಅ’ಕಾರಂ ತಸ್ಯ ಲಕ್ಷಣಮ್ ||
‘ಅ’ ಎಂದರೆ, ಆಶೆಗಳನ್ನು ಬಿಟ್ಟಿರುವುದು. ಆದಿ-ಮಧ್ಯ-ಅಂತ ಎಂಬ ಎಣಿಕೆಯಿಲ್ಲದೆ ಶುಚಿಯಾಗಿರುವುದು. ಎಂದೆಂದೂ ಆನಂದದಲ್ಲಿ ನೆಲೆಸಿರುವುದು.
ವಾಸನಾವರ್ಜಿತಾ ಯೇನ ವಕ್ತವ್ಯಂ ಚ ನಿರಾಮಯಂ | ವರ್ತಮಾನೇಷು ವರ್ತೇತ ‘ವ’ಕಾರಂ ತಸ್ಯ ಲಕ್ಷಣಮ್ ||
‘ವ’ ಎಂದರೆ, ಹಿಂದಿನ ವಾಸನೆಗಳೆಲ್ಲ ಬಿಟ್ಟುಹೋಗಿರುವುದು. ಅವನ ಮಾತಿನಲ್ಲಿ ದೋಷವಾಗಲಿ, ಗೊಂದಲವಾಗಲಿ ಇರದು. ಅವನು ಹಿಂದಣ ಮುಂದಣ ಸಂದರ್ಭಗಳನ್ನು ಕೈಬಿಟ್ಟು ಈಗಣ ಕ್ಷಣದಲ್ಲಿ ಮಾತ್ರ ಇರುವನು.
ಧೂಲಿದೂಸರಗಾತ್ರಾಣಿ ಧೂತಚಿತ್ತೋ ನಿರಾಮಯಃ । ಧಾರಣಾಧ್ಯಾನನಿರ್ಮುಕ್ತೋ ‘ಧೂ’ಕಾರಸ್ತಸ್ಯ ಲಕ್ಷಣಮ್ ||
‘ಧೂ’ ಎಂದರೆ, ಧೂಳಿನಿಂದ ಮುಚ್ಚಲ್ಪಟ್ಟ ದೇಹ. ತೊಳೆಯಲ್ಪಟ್ಟ ಮನಸ್ಸು. ಯಾವೊಂದು ಈತಿಬಾಧೆಯೂ ಇರದು. ಧ್ಯಾನ-ಧಾರಣಗಳೆಂಬ ಯೋಗವಿಧಿಗಳೂ ಅವನಿಗೆ ಬೇಕಾದುದಲ್ಲ.
ತತ್ತ್ವಚಿಂತಾ ಧೃತಾ ಯೇನ ಚಿಂತಾಚೇಷ್ಟಾವಿವರ್ಜಿತಃ | ತಮೋಹಂಕಾರನಿರ್ಮುಕ್ತಃ ‘ತ’ಕಾರಸ್ತಸ್ಯ ಲಕ್ಷಣಮ್ ||
‘ತ’ ಎಂದರೆ ತತ್ತ್ವವನ್ನು ಕುರಿತದ್ದೇ ಚಿಂತನೆ. ಉಳಿದಂತೆ ಯಾವ ಚಿಂತೆಯೂ ಇರದಿರುವುದು. ತಮಸ್ಸೆಂಬ ಅಜ್ಞಾನವಿಲ್ಲದೆ, ನಾನು- ನನ್ನದು ಎಂಬ ಅಹಂಕಾರವಿಲ್ಲದಿರುವುದು.
ಇಂಥ ಲಕ್ಷಣಸಂಪನ್ನವುಳ್ಳ ಅವಧೂತರು ಮಾತ್ರ ಸದಾ ಆನಂದದಲ್ಲಿ ನೆಲೆಸುತ್ತಾರೆ.


















